ಮಾತುಗಳಿಂದ ಯಾವುದನ್ನೂ ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ; ಆದರೂ ಜನರು ಮಾತಾಡುತ್ತಲೇ ಇರುವರು. ನಮ್ಮ ಕಿವಿಗಳು ಮಾತುಗಳನ್ನು ಕೇಳುತ್ತಲೇ ಇರುತ್ತವೆ; ಆದರೂ ನಮ್ಮ ಕಿವಿಗಳು ತುಂಬುವುದಿಲ್ಲ. ನಮ್ಮ ಕಣ್ಣುಗಳು ನೋಡುತ್ತಲೇ ಇರುತ್ತವೆ; ಆದರೂ ಅವು ತುಂಬುವುದಿಲ್ಲ.
ಬಹುಕಾಲದ ಹಿಂದಿನ ಘಟನೆಗಳನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಈಗ ನಡೆಯುತ್ತಿರುವ ಸಂಗತಿಗಳನ್ನು ಮುಂದಿನ ಕಾಲದ ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಹೀಗೆ, ತಮಗಿಂತ ಮುಂಚೆ ಇದ್ದವರು ಮಾಡಿದ್ದನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಜ್ಞಾನದಿಂದ ಸಂತೋಷವಾಗುವುದೇ?
ನಾನು ಮನಸ್ಸಿನಲ್ಲಿ, “ನಾನು ಬಹು ಜ್ಞಾನಿ. ನನಗಿಂತ ಮೊದಲು ಜೆರುಸಲೇಮನ್ನು ಆಳಿದ ಏಲ್ಲಾ ರಾಜರುಗಳಿಗಿಂತ ನಾನು ಜ್ಞಾನಿ. ನಾನು ಜ್ಞಾನವನ್ನೂ ವಿವೇಕವನ್ನೂ ಚೆನ್ನಾಗಿ ತಿಳಿದುಕೊಂಡಿರುವೆ” ಎಂದುಕೊಂಡೆನು.